ನನ್ನೆಚೋಡ ದೇವ -
	ತೆಲುಗು ಚೋಳವಂಶಕ್ಕೆ ಸೇರಿದ ರಾಜಕವಿಗಳಲ್ಲಿ ಒಬ್ಬ. ಈತನಿಗೆ ಕವಿರಾಜಶಿಖಾಮಣಿ ಟೆಂಕಣಾದಿತ್ಯ ಎಂಬ ಬಿರುದುಗಳು ಇದ್ದುವು. ಈತನ ತಂದೆ ಜೋಡಬಲ್ಲಿ, ತಾಯಿ ಶ್ರೀಸತಿ. ಗುರು ಜಂಗಮ ಮಲ್ಲಿಕಾರ್ಜುನ.

	ಈತನ ಕಾಲದ ಬಗ್ಗೆ ವಿವಾದಗಳಿವೆ. ಮಾನವಲ್ಲಿ ರಾಮಕೃಷ್ಣಕವಿ ಈತ ಕ್ರಿ.ಶ. 940ರ ಕಾಲಕ್ಕೆ ಸೇರಿದವನೆಂದು ಅಭಿಪ್ರಾಯಪಟ್ಟಿದ್ದಾರೆ. ನೇಬಟೂರಿ ವೆಂಕಟರಮಣಯ್ಯ ಮುಂತಾದವರು ಇದನ್ನೇ ಅನುಮೋದಿಸಿದ್ದಾರೆ. ತೆಲುಗಿನ ಆದಿಕವಿ ಎಂದು ಹೆಸರು ಪಡೆದಿರುವ ನನ್ನಯ್ಯನಿಗೆ (ಹನ್ನೊಂದನೆಯ ಶತಮಾನ) ಈತ ಸಮಕಾಲೀನನೆಂಬುದು ಇನ್ನೊಂದು ಅಭಿಪ್ರಾಯ. ಇನ್ನು ಕೆಲವರು ಕ್ರಿ.ಶ. 1275-1350 ಕಾಲದವನೆಂದು ಹೇಳುತ್ತಾರೆ. ಆದರೆ ಹನ್ನೊಂದು ಅಥವಾ ಹನ್ನೆರಡನೆಯ ಶತಮಾನದವನೆಂದು ಸಾಮಾನ್ಯವಾಗಿ ಅಂಗೀಕೃತವಾದ ಅಭಿಪ್ರಾಯ.

	ಈತ ಬರೆದಿರುವ ಕಳಾವಿಲಾಸಮು ಎಂಬ ಗ್ರಂಥದ ನಾಲ್ಕು ಪದ್ಯಗಳು ವೇಟೂರು ಪ್ರಭಾಕರಶಾಸ್ತ್ರಿ ಅವರು ಸಂಕಲಿಸಿರುವ ಪ್ರಬಂಧರತ್ನಾವಳಿಯಲ್ಲಿ ಉಲ್ಲೇಖಗೊಂಡಿವೆ. ಈ ಕಾವ್ಯವನ್ನು ಕುರಿತು ಇದಕ್ಕೂ ಹೆಚ್ಚಾಗಿ ತಿಳಿಯದು. ಈ ಕವಿಯ ಪ್ರಸಿದ್ಧ ಕಾವ್ಯ ಕುಮಾರಸಂಭವಮು. ಇದು ಹನ್ನೆರಡು ಆಶ್ವಾಸನೆಗಳುಳ್ಳ ಮಹಾಕಾವ್ಯ. ಇದನ್ನು ಕವಿ ತನ್ನ ಗುರುವಾದ ಜಂಗಮ ಮಲ್ಲಿಕಾರ್ಜುನನಿಗೆ ಅರ್ಪಿಸಿದ್ದಾನೆ. ಮಹಾವಿದ್ವಾಂಸನೂ ತಾತ್ತ್ವಿಕನೂ ಆಗಿದ್ದ ಮಲ್ಲಿಕಾರ್ಜುನನಿಗೂ ಕಾವ್ಯನಾಯಕನಾದ ಪರಮೇಶ್ವರನಿಗೂ ಕವಿ ಇದರಲ್ಲಿ ಅಭೇದವನ್ನು ಕಲ್ಪಿಸಿದ್ದಾನೆ. ಕಾಳಿದಾಸನ ಕುಮಾರಸಂಭವ ಶಿವಪುರಾಣ ಮುಂತಾದ ಕಡೆಗಳಿಂದ ಕೆಲವು ವಿಷಯಗಳನ್ನು ತೆಗೆದುಕೊಂಡಿದ್ದರೂ ಒಟ್ಟಿನಲ್ಲಿ ಈತನ ಕುಮಾರಸಂಭವ ಸ್ವತಂತ್ರ ಕಾವ್ಯವೆಂದೇ ಹೇಳಬಹುದು.

	ಈ ಕವಿ ಬಳಸಿರುವ ಕೆಲವು ಪದಗಳ ಅರ್ಥವಿವರಣೆಯನ್ನು ನೀಡಲು ಅನೇಕ ತೆಲುಗು ವಿದ್ವಾಂಸರು ಪ್ರಯತ್ನಿಸಿದ್ದಾರೆ. ಮಾರ್ಗಕವಿತೆ, ದೇಶೀಕವಿತೆ, ವಸ್ತುಕವಿತೆ, ಜಾನುತೆಲುಗು ಮುಂತಾದವು ಇಂಥ ಪದಗಳಾಗಿವೆ. ತೆಲುಗು ಕವಿಗಳಲ್ಲಿ ಈ ಪದಗಳನ್ನು ಬಳಸಿದವರಲ್ಲಿ ಈತನೇ ಮೊದಲನೆಯವ.

	ಇನ್ನು ಕಾವ್ಯದ ವಸ್ತುವನ್ನು ಕುರಿತು ಒಂದೆರಡು ಮಾತುಗಳನ್ನು ಹೇಳಬಹುದು. ಇದು ಕಾಳಿದಾಸನ ಕುಮಾರಸಂಭವ ಅನುವಾದವಲ್ಲ. ಭಾರತದಲ್ಲಿಯೂ ವಾಯು ಬ್ರಹ್ಮಾಂಡ ಸ್ಕಾಂದ ಶಿವಪುರಾಣಗಳಲ್ಲಿಯೂ ಈ ಕಥೆ ಇರುತ್ತದೆ. ಕಾಳಿದಾಸನದು ಕೇವಲ ಕಾವ್ಯದೃಷ್ಟಿ; ನನ್ನೆಚೋಡನದೋ ಕಾವ್ಯ ದೃಷ್ಟಿಯ ಜತೆಗೆ ಶಿವಪಾರಮ್ಯವನ್ನು ಸ್ಥಾಪಿಸುವ ದೃಷ್ಟಿ.

	ಕಥಾವಸ್ತುವಿಗೆ ಸಂಬಂಧಿಸಿದಂತೆ ಈತನ ಕಾವ್ಯದಲ್ಲಿ ಕೆಲವು ಗಮನಾರ್ಹ ಅಂಶಗಳಿವೆ. ಸತೀದೇವಿಯ ವೃತ್ತಾಂತವನ್ನು ಈತ ವಿಫಲವಾಗಿ ಬೆಳೆಸಿದ್ದಾನೆ. ದಕ್ಷಾಧ್ವರ ಧ್ವಂಸವನ್ನು ಶಿವಪಾರಮ್ಯ ದೃಷ್ಟಿಯಿಂದ ತೆಗೆದುಕೊಂಡಿದ್ದಾನೆ. ಗಣಪತಿಯ ಜನ್ಮವೃತ್ತಾಂತವನ್ನು ವಿಶಿಷ್ಟ ರೀತಿಯಲ್ಲಿ ಹೇಳಿದ್ದಾನೆ. ವಿಶ್ವಜನನೀಜನಕರಾದ ಪಾರ್ವತೀ ಪರಮೇಶ್ವರರು ಆನೆಗಳ ರೂಪದಲ್ಲಿ ಭೋಗಿಸಿದಾಗ ಗಣಪತಿಯ ಸೃಷ್ಟಿಯಾಯಿತು ಎಂಬ ಕಲ್ಪನೆ ಮನೋಹರವಾಗಿದೆ. ರತೀಮನ್ಮಥರ ಸಂವಾದ ಸಂಸ್ಕøತ ಕುಮಾರಸಂಭವದಲ್ಲಿ ಇಲ್ಲ. ತಾರಕಾಸುರನೊಂದಿಗೆ ಯುದ್ಧ ಮಾಡುವ ಮುಂಚೆ ರಾಯಭಾರಗಳನ್ನು ನಡೆಸುವುದು ಇತ್ಯಾದಿ ಈತನ ಸ್ವಂತ ಕಲ್ಪನೆಗಳಾಗಿವೆ.

	ತೆಲುಗಿನಲ್ಲಿ ಪ್ರಬಂಧ ಎಂಬುದು ಒಂದು ವಿಶಿಷ್ಟ ಮಹಾಕಾವ್ಯಕ್ಕೆ ಹೆಸರಾಗಿದೆ. ಶ್ರೀಕೃಷ್ಣದೇವರಾಯನ ಕಾಲದಲ್ಲಿ ಹೊರಬಂದ ಅನೇಕ ಕಾವ್ಯಗಳಿಗೆ ಪ್ರಬಂಧಗಳೆಂಬ ಹೆಸರು ರೂಢವಾಗಿದೆ. ಪುರಾಣಗಳಿಂದ ಒಂದು ಕಥೆಯನ್ನು ತೆಗೆದುಕೊಂಡು ಅದನ್ನು ವಿಸ್ತಾರಗೊಳಿಸಿ ಅಷ್ಟಾದಳ ವರ್ಣನೆಗಳಿಂದ ತುಂಬಿಸಿ, ಶೃಂಗಾರರಸ ಪ್ರಧಾನವಾಗಿ, ಒಬ್ಬನೇ ನಾಯಕನನ್ನು ನಿರೂಪಿಸಿ, ವಸ್ತುವಿನಲ್ಲಿ ಐಕ್ಯತೆಯನ್ನು ತೋರಿದರೆ ಆ ಕಾವ್ಯವನ್ನು ಪ್ರಬಂಧವೆಂದು ಕರೆಯುತ್ತಾರೆ. ಮೇಲಿನ ಎಲ್ಲ ಲಕ್ಷಣಗಳಿಂದ ಕೂಡಿರುವ ಈತನ ಕುಮಾರಸಂಭವವನ್ನು ಪ್ರಥಮಾಂಧ್ರ ಪ್ರೌಢ ಪ್ರಬಂಧವೆಂದು ಹೇಳುವುದುಂಟು.

	ಮಾರ್ಗ-ದೇಸಿ, ವಸ್ತುಕವಿತೆ, ಜಾನು ತೆಲುಗು ಮುಂತಾದ ಪದಗಳನ್ನು ಬಳಸುವಾಗ ಈತ ಕನ್ನಡದಿಂದ ಸ್ಫೂರ್ತಿಪಡೆದರೂ ಅವುಗಳಿಗೆ ತನ್ನದೇ ಆದ ಒಂದು ವಿಶಿಷ್ಟ ಅರ್ಥವನ್ನು ಕೊಟ್ಟಿದ್ದಾನೆ. ದೇವತಾಸ್ತುತಿ, ಕವಿಸ್ತುತಿ, ಕೃತಿಪತಿ ವರ್ಣನೆ, ಕಥಾನಾಯಕನಿಗೂ ಕೃತಿಪತಿಗೂ ಅಭೇದ ಕಲ್ಪನೆ ಮುಂತಾದವನ್ನು ಈತ ಕನ್ನಡದಿಂದ ತೆಗೆದುಕೊಂಡಿದ್ದಾನೆ.

	ಪ್ರತಿ ಆಶ್ವಾಸದ ಕೊನೆಯಲ್ಲೂ ಷಷ್ಠೀ ವಿಭಕ್ತಿಯೊಂದಿಗೆ ಕೊನೆಗೊಳ್ಳುವ ಪದ್ಯಗಳನ್ನು ರಚಿಸುವ ಸಂಪ್ರದಾಯವನ್ನು ಈತ ಪ್ರಾರಂಭಿಸಿದ್ದಾನೆ. ಇವು ಸಂಸ್ಕøತದಲ್ಲಿಯೂ ಕನ್ನಡದಲ್ಲಿಯೂ ಮುದ್ರಾಲಂಕಾರವೆನಿಸಿವೆ. ತೆಲುಗಿನಲ್ಲಿ ಮೊದಲ ಬಾರಿಗೆ ಬಂಧ ಕವಿತ್ವವನ್ನು ಪ್ರಯೋಗಿಸಿದವ ಈತನೇ. ಚಕ್ರಬಂಧ, ನಾಗಬಂಧ, ಚತುರ್ವಿಧ ಕಂದ, ಕಂದಗರ್ಭವೃತ್ತ ಮುಂತಾದ ಅನೇಕ ಚಿತ್ರವಿಚಿತ್ರ ಪದ್ಯಗಳನ್ನು ಈತ ಬರೆದಿದ್ದಾನೆ. ದೇಸೀಯವಾದ ನಾಣ್ನುಡಿಗಳು, ನುಡಿಗಟ್ಟುಗಳು ಈತನ ಕಾವ್ಯದುದ್ದಕ್ಕೂ ಕಂಡುಬರುತ್ತವೆ. ವ್ಯಾಕರಣ ವಿರುದ್ಧ ಪ್ರಯೋಗಗಳನ್ನೂ ವಿವಿಧ ಛಂದಸ್ಸುಗಳನ್ನೂ ಈತ ಸಾಕಷ್ಟು ಬಳಸಿದ್ದಾನೆ.

	ಈತನ ವರ್ಣನೆಗಳು ಸಾಮಾನ್ಯವಾಗಿ ಸಾಂಪ್ರದಾಯಿಕವಾಗಿದ್ದರೂ ಕೆಲವು ಅಸಾಧಾರಣವಾಗಿದ್ದು ಇವನ ಕಲ್ಪನಾವೈಭವವನ್ನು ತೋರಿಸುತ್ತವೆ. ಉದ್ಯಾನವನದಲ್ಲಿ ಉಮಾಮಹೇಶ್ವರರ ವಿಹಾರ, ವಿಟವಿಟೀಜನಗಳ ಜಲಕ್ರೀಡೆ, ಕಥಾಗತಿಗೆ ಸರಿಹೋಗುವ ರವಿ-ಶಶಿ ವರ್ಣನೆಗಳು, ಕುಮಾರೋದಯ ವರ್ಣನೆ, ಆರು ಋತುಗಳ ವರ್ಣನೆಯ ಹೆಸರಿಸತಕ್ಕಂಥವಾಗಿವೆ. ಏಕಾದಶ, ದ್ವಾದಶ ಆಶ್ವಾಸಗಳಲ್ಲಿ ಮುಖ್ಯರಸ ವೀರವಾಗಿದೆ. ಇದು ಕಾವ್ಯದಲ್ಲಿ ಪ್ರಧಾನರಸವಾದ ಶೃಂಗಾರಕ್ಕೆ ಅಂಗವಾಗಿದೆ. ಕಾವ್ಯದಲ್ಲಿ ಯುದ್ಧಗಳ ವರ್ಣನೆ ಬಂದಾಗ ಈತ ತನ್ನ ಕಾಲದ ಅನೇಕ ರೀತಿಗಳನ್ನು ಸೇರಿಸಿ ಅವಕ್ಕೆ ಸಾಮಾಜಿಕ ಪ್ರಾಧಾನ್ಯವನ್ನು ಕೊಟ್ಟಿದ್ದಾನೆ. ಈ ಯುದ್ಧ ವರ್ಣನೆಗಳು ತಿಕ್ಕನ ಮುಂತಾದ ಈತನ ಅನಂತರದ ಮಹಾಕವಿಗಳಿಗೆ ಮಾರ್ಗದರ್ಶಕವಾಗಿದೆ. 

	ಈತ ತೆಲುಗಿನ ಶಿವಕವಿಗಳಲ್ಲಿ ಒಬ್ಬ. ತೆಲುಗು ಸಾಹಿತ್ಯ ಚರಿತ್ರೆಯಲ್ಲಿ ಶಿವಕವಿಯುಗವೆಂಬುದು ಒಂದು ಪ್ರತ್ಯೇಕ ಸ್ಥಾನವನ್ನು ಪಡೆದಿದೆ. ಹನ್ನೊಂದು ಮತ್ತು ಹದಿಮೂರನೆಯ ಶತಮಾನಗಳ ಮಧ್ಯಕಾಲವಾದ ಶಿವಕವಿಯುಗ ಈತನನ್ನೂ ಮಲ್ಲಿಕಾರ್ಜುನ ಪಂಡಿತಾರಾಧ್ಯ ಮತ್ತು ಪಾಲ್ಕುರಿಕೆ ಸೋಮನಾಥರನ್ನೂ ಒಳಗೊಂಡಿದೆ. ಸಾಮಾನ್ಯವಾಗಿ ದೇಸೀಯ ಕಥಾವಸ್ತುವನ್ನು ತೆಗೆದುಕೊಳ್ಳುವುದು, ದೇಸೀಯ ಛಂದಸ್ಸನ್ನು ಬಳಸುವುದು, ವ್ಯಾಕರಣವಿರುದ್ಧ ಪ್ರಯೋಗಗಳನ್ನು ಮಾಡುವುದು ಶಿವಪಾರಮ್ಯವನ್ನು ನಿರೂಪಿಸುವುದು ಶಿವಕವಿಗಳ ರಚನೆಗಳ ವೈಶಿಷ್ಟ್ಯವಾಗಿದೆ.				(ಆರ್.ವಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ